ಮಿಲ್ಲಿಕನ್, ರಾಬರ್ಟ್ ಆ್ಯಂಡ್ರೂಸ್
1953. ಅಮೆರಿಕನ್ ಭೌತವಿಜ್ಞಾನಿ. ಜನನ ಇಲಿನಾಯ್ 22-3-1868. ಮರಣಾ ಕ್ಯಾಲಿಫೋರ್ನಿಯ 19-12-1953. ಸ್ನಾತಕಪೂರ್ವ ಶಿಕ್ಷಣದ ದಿನಗಳಲ್ಲಿ ಮಿಲ್ಲಿಕನ್ನರಿಗೆ ಭೌತವಿಜ್ಞಾನದಲ್ಲಿದ್ದ ಆಸಕ್ತಿ ತೀರ ಮೇಲುಪದರದ್ದು. 1891ರಲ್ಲಿ ಪದವಿ ಪಡೆದ ತರುವಾಯ ಈ ಪರಿಸ್ಥಿತಿ ಬದಲಾಗಿ ಇವರು ಹಲವು ವರ್ಷ ಭೌತವಿಜ್ಞಾನವನ್ನು ಒಂದು ಶಾಲೆಯಲ್ಲಿ ಬೋಧಿಸಿದರು. ಮುಂದೆ ಜರ್ಮನಿಯಲ್ಲಿ ಪೋಸ್ಸ್ ಡಾಕ್ಟೋರೇಟ್ ಶಿಕ್ಷಣ ಪಡೆದು ಚಿಕಾಗೊ ವಿಶ್ವವಿದ್ಯಾಲಯ ಸೇರಿದರು (1910). 
ಅವರಿಗೆ ಭೌತವಿಜ್ಞಾನ ಪ್ರಪಂಚದಲ್ಲಿ ಖ್ಯಾತಿ ತಂದುಕೊಟ್ಟ.  ಪ್ರಯೋಗವನ್ನು 1906ರಲ್ಲಿ ಪ್ರಾರಂಭಿಸಿದರು. ಒಂಟಿ ಎಲೆಕ್ಟ್ರಾನಿನ ವಿದ್ಯುದಾವೇಶದ ಗಾತ್ರ (ಪರಿಮಾಣ) ಏನು? ಎತ್ತರದಲ್ಲಿ ಇರಿಸಿದ ಆವಿಷ್ಟ ಫಲಕದ ಆಕರ್ಷಣೆಗೆ ವಿರುದ್ಧವಾಗಿ ವಿದ್ಯುದಾವಿಷ್ಟ ನೀರಿನ ಪುಟ್ಟ ಹನಿಗಳು ಗುರುತ್ವದ ಪ್ರಭಾವದಲ್ಲಿ ವಾಯುವಿನ ಮೂಲಕ ಸಾಗುವ ಪಥವನ್ನು ಅಭ್ಯಸಿಸಿದರು. ಬಾಷ್ಟೀಭವನದ ಪರಿಣಾಮ ನಿವಾರಿಸಲು 1911ರ ವೇಳೆಗೆ ಎಣ್ಣೆ ಹುಂಡುಗಳನ್ನು (ನೀರಹನಿಗಳ ಬದಲಾಗಿ) ಬಳಸತೊಡಗಿದರು.

	ಹುಂಡುಗಳನ್ನು (ಬಾಬ್ಸ್) ಕೋಷ್ಠದ ಒಳಗೆ ಎಕ್ಸ್‍ಕಿರಣಗಳಿಗೆ ಒಡ್ಡುವುದರ ಮೂಲಕ ಮಿಲ್ಲಿಕನ್ ಆಗ ಈಗ ಒಂದು ಹುಂಡಿಗೆ ಒಂದು ಅಯಾನ್‍ತಾಗುವಂತೆ ಮಾಡುತ್ತಿದ್ದರು. ಹೀಗೆ ಹುಂಡಿಗೆ ಅಯಾನ್ ಸೇರ್ಪಡೆ ಆದಾಗ ಮೇಲುಗಡೆ ಇದ್ದ  ಆವಿಷ್ಟ ಫಲಕದ ಪರಿಣಾಮ ಅದರ ಮೇಲೆ ಹಠಾತ್ತಾಗಿ ಪ್ರಬಲವಾಗುತ್ತಿತ್ತು ಮತ್ತು ಈ ಕಾರಣದಿಂದ ಹುಂಡು ನಿಧಾನವಾಗಿ ಕೆಳಬೀಳುತ್ತಿತ್ತು ಅಥವಾ ಒಮ್ಮೊಮ್ಮೆ ಕ್ರಮೇಣ ಮೇಲಕ್ಕೂ ಏರುತ್ತಿತ್ತು. ಚಲನೆಯಲ್ಲಿಯ ಕನಿಷ್ಠ ಬದಲಾವಣೆಯ ಕಾರಣ ಒಂಟಿ ಎಲೆಕ್ಟ್ರಾನಿಕ್ ಆವೇಶದ ಸೇರ್ಪಡೆ ಎಂಬುದಾಗಿ ಮಿಲ್ಲಿಕನ್ ಭಾವಿಸಿದರು. ಮೇಲ್ಮೊಗ ವಿದ್ಯುತ್ಕಾಂತೀಯ ಆಕರ್ಷಣೆಯ ಹಾಗೂ ಕೆಳಮೊಗ ಗುರುತ್ವಾಕರ್ಷಣೆಯ ಪರಿಣಾಮಗಳನ್ನು. ಇಂಥ ಒಂದು ಸೇರ್ಪಡೆ ಮಾಡುವುದರ ಮೊದಲೂ ತರುವಾಯವೂ ಸಂತುಲಿಸುವುದರ ಮೂಲಕ ಮಿಲ್ಲಿಕನ್ ಒಂಟಿ ಎಲೆಕ್ಟ್ರಾನಿನ ಆವೇಶವನ್ನು ಗಣಿಸಲು ಸಮರ್ಥರಾದರು. ವಿದ್ಯುದಾವೇಶ ಶಕ್ತರಾರು. ವಿದ್ಯುತ್ತು ಕಣಸ್ವಭಾವದ್ದಾಗಿದೆಯೆಂದು ತೋರಿಸಿಕೊಟ್ಟ ಅಂತಿಮ ಸಾಧನೆ ಇದು. ಒಂದು ಶತಮಾನದ ಮೊದಲ ಫ್ಯಾರಡೇಯ ಕೃತಿ ಈ ದಿಶೆಯತ್ತ ಗುರಿ ಹಿಡಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು.

	ಈ ಅದ್ಭುತ (ಮತ್ತು ಒಮ್ಮೆ ವಿವರಿಸಿದ ಬಳಿಕ ಅತ್ಯಂತ ಸರಳ) ಪ್ರಯೋಗ ಇವರಿಗೆ 1923ರ ಸಾಲಿನ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ತಂದುಕೊಟ್ಟಿತು. ದ್ಯುತಿವೈದ್ಯುತ ಪರಿಣಾಮ ಕುರಿತಂತೆ ಐನ್‍ಸ್ಟೈನ್ ಸೈದ್ಧಾಂತಿಕವಾಗಿ ನಿಗಮಿಸಿದ್ದ ಸಮೀಕರಣಗಳನ್ನು ತಾಳೆ ನೋಡಲು ಮಿಲ್ಲಿಕನ್ ರೂಢಿಸಿದ ಸೂಕ್ಷ್ಮ ಪ್ರಾಯೋಗಿಕ ವಿಧಾನವನ್ನೂ ಈ ಪಾರಿತೋಷಿಕದ ಪ್ರವಚನಸಂಧರ್ಭದಲ್ಲಿ ಉಲ್ಲೇಖಿಸಲಾಗಿತ್ತು.

	1921ರ ವೇಳೆಗೆ ಮಿಲ್ಲಿಕನ್ ಕ್ಯಾಲಿಫೋರ್ನಿಯ  ಇನ್‍ಸ್ಪಿಟ್ಯೂಟ್ ಆಫ್ ಟಿಕ್ನಾಲಜಿಗೆ ವರ್ಗವಾಗಿ ಹೋದರು. ಮುಂದೆ ನಿವೃತ್ತಿಯ ತನಕವೂ ಅಲ್ಲಿಯೇ ಇದ್ದರು. ಅಲ್ಲಿ ಇವರು ಬಾಹ್ಮಕಾಶದಿಂದ ಬರುತ್ತಿದ್ದ ವಿಕಿರಣದ ಬಗ್ಗೆ ಕುತೂಹಲ ಅದರು. ಇದನ್ನು ತತ್ಟೂರ್ವ ವಿ. ಎಫ್ ಹೆಸ್ ಎಂಬಾತ ಆವಿಷ್ಕರಿಸಿದ್ದ. ಈ ವಿಕಿರಣವನ್ನು ಮಿಲ್ಲಿಕನ್ ವಿಶ್ವಕಿರಣಗಳು ಎಂದು ಹೆಸರಿಸಿದರು (1925), ಮುಂದೆ ಇವರು ಉನ್ನತ ವಾಯುಮಂಡಲದಲ್ಲಿ ವಿಕಿರಣದ ತೀವ್ರತೆಯನ್ನು ವಿಮಾನಗಳ ಹಾಗೂ  ಬಲೂನುಗಳ ಮೂಲಕವೂ ಸರೋವರಗಳ ತಳದಲ್ಲಿಯ ತೀವ್ರತೆಯನ್ನು ಯುಕ್ತ ಮುಳುಗು ಉಪಕರಣಗಳ ಮೂಲಕವೂ ಅಳೆದು ಈ ಕ್ಷೇತ್ರಕ್ಕೆ (ಬಾಹ್ಯಕಾಶ ವಿಕಿರಣಮಾಪನೆ) ಭದ್ರಬುನಾದಿ ಹಾಕಿದರು. ವಿಶ್ವಕಿರಣಗಳು ವಿಶ್ವದ ಸೀಮಾ ಪ್ರದೇಶಗಳಲ್ಲಿ ಜನಿಸುತ್ತವೆ. ಅವು ದ್ರವ್ಯದ ಸೃಷ್ಟಿಕಾರ್ಯದ ವೇಳೆ ಉಗಮಿಸುವ ಜನನಾ ಕ್ರಂದನಗಳು ಎಂದು ಅವರು ನಂಬಿದ್ದರು. ಇದು ತಪ್ಪೆಂದು ಇಂದು ತಿಳಿದಿದೆ. ವಿಶ್ವಕಿರಣಗಳು ನೋವಾ ಮತ್ತು ಮಹಾನೋವಾ ಸ್ಫೋಟನೆಯ ಕಾರಣವಾಗಿ ಉದ್ಭವಿಸುವ ಉನ್ನತ ಶಕ್ತಿ ಪ್ರೋಟಾನ್ ಕಣಗಳು.

	ವಿಜ್ಞಾನ ಮತ್ತು ಧರ್ಮ ಇವು ಪರಸ್ಪರ ಪೂರಕ: ಒಂದೊಂದನ್ನೂ ಸರಿಯಾಗಿ ಅರ್ಥಮಾಡಿಕೊಂಡಾಗ ಅವುಗಳ ನಡುವೆ ನಿಜವಾಗಿಯೂ ಯಾವುದೇ ವಿರೋಧ ಕಂಡುಬರುವುದಿಲ್ಲ ಎಂಬುದು ಮಿಲ್ಲಿಕನ್ನರ ಸಿದ್ಧಾಂತ. ಇದು ಸೈನ್ಸ್ ಅಂಡ್ ಲೈಫ್ (1924) ಹಾಗೂ ದಿ ಎವಲ್ಯೂಷನ್ ಆಫ್ ಸೈನ್ಸ್ ಅಂಡ್ ರಿಲಿಜನ್ (1927) ಎಂಬ ಅವರ ಕೃತಿಗಳಲ್ಲಿ ಪ್ರತಿಪಾದಿತವಾಗಿದೆ. ಅವರ ಇತರ ಕೃತಿಗಳು: ಎಲೆಕ್ಟ್ರಿಸಿಟಿ ಸೌಂಡ್ ಅಂಡ್ ಲೈಟ್ (1908), ಟೈಮ್ ಮ್ಯಾಟರ್ ಅಂಡ್ ವ್ಯಾಲ್ಯೂಸ್ (1932). ಕಾಸ್ಮಿಕ್ ರೇಸ್ (1939) ಮತ್ತು ಎಲೆಕ್ಟ್ರಾನ್ಸ್ (+ಅಂಡ್ _) ಪ್ರೋಟಾನ್ಸ್, ನ್ಯೂಟ್ರಾನ್ಸ್, ಮೊಸೊಟ್ರಾನ್ಸ್ ಅಂಡ್ ಕಾಸ್ಮಿಕ್ ರೇಸ್ (1947). ಇವರ ಆತ್ಮಕಥನವನ್ನು (1950) ಗ್ಲೆನ್ ಟಿ. ಸೀ ಬೋರ್ಗ್ ಆಧುನಿಕ (20ನೆಯ ಶತಮಾನದ) ವಿಜ್ಞಾನದ ಒಂದು ಇತಿಹಾಸ ಎಂದು ಕೆರೆದಿದ್ದಾರೆ.
(ಬಿ.ವಿ.ಎಸ್.ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ